ಆರೋಗ್ಯವೇ ಭಾಗ್ಯ

 

ಮುತ್ತಯ್ಯ ಶೆಟ್ಟಿ ಎನ್ನುವ ಚಕ್ಕುಲಿ ವ್ಯಾಪಾರಿ ಯಿದ್ದ. ಅವನು ಬುಟ್ಟಿ ತುಂಬ ಚಕ್ಕುಲಿ ತಯಾರಿಸಿ ತಲೆಯಲ್ಲಿ ಹೊತ್ತು ಊರೂರು ತಿರುಗುತ್ತಿದ್ದ. ರುಚಿಕರವಾದ ಚಕ್ಕುಲಿಗಳು ಬಲು ಬೇಗನೆ ಮಾರಾಟವಾಗುತ್ತಿದ್ದವು.
ಪರಿಶ್ರಮಕ್ಕೆ ತಕ್ಕ ಲಾಭ ಮಾತ್ರ ಸಿಗುತ್ತಿತ್ತು. ಶೆಟ್ಟಿ ಸುಖದಿಂದ ಕಾಲಯಾಪನೆ ಮಾಡುತ್ತಿದ್ದ. ಆದರೆ ಅವನ ಹೆಂಡತಿ ಸದಾ ಗುನುಗುತ್ತಿದ್ದಳು. “ಇಷ್ಟು ಸಣ್ಣ ಲಾಭ ಸಿಕ್ಕಿದರೆ ನಾವು ಉದ್ಧಾರವಾಗುವುದು ಯಾವಾಗ? ನೀವು ರಾಶಿ ರಾಶಿ ಹಣ ಸಂಪಾದಿಸುವ ದಾರಿ ಹುಡುಕಿ. ಇಲ್ಲವಾದರೆ ನಾನು ತವರಿಗೆ ಹೋಗುತ್ತೇನೆ’ ಎಂದು ಪೀಡಿಸುತ್ತಿದ್ದಳು.

ಶೆಟ್ಟಿಗೆ ರಂಗಯ್ಯನೆಂಬ ಗೆಳೆಯನಿದ್ದ. ಅವನಿಗೆ ಸಾಕಷ್ಟು ಹೊಲ ವಿದ್ದರೂ ಮೈಗೆ ಆರೋಗ್ಯವಿರಲಿಲ್ಲ. ಹಲವಾರು ಕಾಯಿಲೆ. ತನ್ನ ಕಾಯಿಲೆ ಗುಣವಾದರೆ ಚೆನ್ನಾಗಿ ದುಡಿದು ಹೊಲದಲ್ಲಿ ಬಂಗಾರ ಬೆಳೆಯುತ್ತಿದ್ದೆನಲ್ಲ ಎಂದು ಹೇಳುತ್ತಿದ್ದ. ಆಗ ಶೆಟ್ಟಿಗೆ ಪರವೂರಿನಲ್ಲಿದ್ದ ವೈದ್ಯರೊಬ್ಬರ ನೆನಪಾಯಿತು. ಎಂಥ ಕಾಯಿಲೆಯನ್ನೂ ಅವರು ಗುಣ ಮಾಡುತ್ತಿದ್ದರು. ತಾನು ಚಕ್ಕುಲಿ ಮಾರಲು ಹೊರಟಾಗ ರಂಗಯ್ಯನನ್ನು ಕರೆದುಕೊಂಡು ಅಲ್ಲಿಗೆ ಹೊರಟ. ಆದರೆ ಮಾರ್ಗ ಮಧ್ಯೆ ಕತ್ತಲಾಗಿ ದಾರಿ ಕಾಣದಂತಾಯಿತು. ಇಬ್ಬರೂ ಒಂದು ನಾಗಸಂಪಿಗೆ ಮರದ ಕೆಳಗೆ ಮಲಗಿಕೊಂಡರು.

ಆ ವೇಳೆ ಶೆಟ್ಟಿ , “ಮನುಷ್ಯನಿಗೆ ಯಾವುದು ಇಲ್ಲವಾದರೂ ಸರಿ. ಧಾರಾಳ ಹಣ ಇರಬೇಕು. ಹಣವಿದ್ದರೆ ಏನೂ ಮಾಡಬಹುದು’ ಎಂದು ಹೇಳಿದ. ಅದನ್ನು ಕೇಳಿ ರಂಗಯ್ಯ, “ಸುಮ್ಮನಿರೋ, ಮುಖ್ಯವಾಗಿ ಆರೋಗ್ಯ ಬೇಕು. ನನ್ನನ್ನೇ ನೋಡು, ಮೈಕೈ ಚೆನ್ನಾಗಿರುತ್ತಿದ್ದರೆ ಎಷ್ಟು ಚೆನ್ನಾಗಿ ದುಡಿದು ಹೊಲದಲ್ಲಿ ಏನೆಲ್ಲ ಬೆಳೆಯುತ್ತಿದ್ದೆ. ಹಣ ಮುಖ್ಯ ಅಲ್ಲವೇ ಅಲ್ಲ’ ಎಂದು ವಾದಿಸಿದ.

“ಹಣವೊಂದಿದ್ದರೆ ಎಲ್ಲವನ್ನೂ ಕೊಳ್ಳಬಹುದು. ಈಗ ನನ್ನ ಬುಟ್ಟಿಯಲ್ಲಿರುವ ಚಕ್ಕುಲಿಗಳೆಲ್ಲ ಬಂಗಾರದ ನಾಣ್ಯಗಳಾದವು ಅಂದುಕೋ. ಮತ್ತೆ ನೋಡು ನನ್ನ ವೈಭವ. ಕಿಸೆಯಲ್ಲಿ ಝಣ ಝಣ ಅನ್ನುತ್ತಿದ್ದರೆ ಯಮನನ್ನು ತಡೆದು ನಿಲ್ಲಿಸಬಹುದು ಗೊತ್ತಾ?’ ಎಂದು ಹೇಳಿದ.

ಆಗ ಮರದ ಮೇಲಿಂದ ಒಂದು ನಾಗಸಂಪಿಗೆಯ ಹೂವು ತಟಕ್ಕನೆ ಚಕ್ಕುಲಿಯ ಬುಟ್ಟಿಯ ಮೇಲೆ ಬಿದ್ದು ಅಲ್ಲೆಲ್ಲ ಬೆಳಕು ಕೋರೈಸಿತು. ಶೆಟ್ಟಿ ಎದ್ದು ಕುಳಿತ. ಬುಟ್ಟಿಯಲ್ಲಿದ್ದ ಚಕ್ಕುಲಿಗಳೆಲ್ಲ ಬಂಗಾರವಾಗಿ ಹೊಳೆಯುತ್ತಿವೆ. ಅವನು ಆಶ್ಚರ್ಯ ಪಡುವಾಗ ಇನ್ನೊಂದು ಹೂವು ರಂಗಯ್ಯನ ಮೇಲೆ ಬಿದ್ದಿತು. ಮರುಕ್ಷಣ ಅವನು, “ನನ್ನ ಕಾಯಿಲೆಯೆಲ್ಲ ಗುಣವಾಗಿದೆ ಕಣೋ. ಈ ಮರದ ಹೂವಿನಲ್ಲಿ ಅದ್ಭುತ ಶಕ್ತಿ ಅಡಗಿದೆ’ ಎಂದು ಹೇಳಿದ.

ಅವರಿಬ್ಬರೂ ರಾತ್ರಿಯೇ ಮನೆಗೆ ಮರಳಿದರು. ಶೆಟ್ಟಿ ಸಂಪತ್ತನ್ನು ಬಳಸಿ ವೈಭವದ ಮನೆ ಕಟ್ಟಿದ. ಬಂಗಾರದ ಬಾಗಿಲುಗಳನ್ನಿರಿಸಿದ. ಬಂಗಾರದ ಬಟ್ಟಲಿನಲ್ಲಿ ಊಟಕ್ಕೆ ಕುಳಿತ. ಹಳೆಯ ಜೀವನ ನೆನಪಾಗಬಾರದೆಂದು ಚಕ್ಕುಲಿಯ ಬುಟ್ಟಿಯನ್ನು ಮೂಲೆಗೆಸೆದ. ದಿನ ಕಳೆದಂತೆ ಅವನಿಗೆ ರಾತ್ರಿ ನಿದ್ದೆ ಬರಲಿಲ್ಲ. ಕಳ್ಳರು ಬಂದು ಈ ಸಂಪತ್ತನ್ನು ಅಪಹರಿಸಿದರೆ ಎಂಬ ಚಿಂತೆಯಲ್ಲಿ ಮನೆಯಿಡೀ ಸುತ್ತುತ್ತಿದ್ದ. ತನ್ನ ಸಂಪತ್ತಿನ ಮೇಲೆ ರಾಜನ ಕಣ್ಣು ಬಿದ್ದರೆ ಎಂದು ಹಗಲು ಯೋಚಿಸುತ್ತಿದ್ದ.

ಚಿನ್ನದ ಬಟ್ಟಲಿನಲ್ಲಿ ಉಣ್ಣುತ್ತಿದ್ದ ಶೆಟ್ಟಿಗೆ ಊಟ ಜೀರ್ಣ ವಾಗಲಿಲ್ಲ. ಸಕ್ಕರೆ ತಿನ್ನದ ಹಾಗಾಯಿತು. ಕಹಿ ಹಾಗಲ ರಸ ದಿನವಿಡೀ ಕುಡಿಯಬೇಕು ಎಂದರು ವೈದ್ಯರು. ಶೆಟ್ಟಿಯ ಹೆಂಡತಿಗೆ ಮೈ ತುಂಬ ಒಡವೆ ಹೇರಿಕೊಳ್ಳಲು ಆಸೆ. ಆದರೆ ಒಡವೆ ಧರಿಸಿದರೆ ತಲೆನೋವು ಬರುತ್ತಿತ್ತು.

ಹೀಗೆ ಕಷ್ಟದಲ್ಲಿರುವಾಗ ಶೆಟ್ಟಿ ಗೆಳೆಯ ರಂಗಯ್ಯ ಹೇಗಿದ್ದಾನೆಂದು ತಿಳಿಯಲು ಅವನಲ್ಲಿಗೆ ಹೋದ. ರಂಗ ಯ್ಯ ಬೆವರಿಳಿಸಿ ದುಡಿದು ಬರಡು ನೆಲವನ್ನು ಹಸಿರಿನ ನಂದನವನವನ್ನಾಗಿಸಿದ್ದ. “ನೋಡು, ಆರೋಗ್ಯ ಭಾಗ್ಯ ನನಗಿರುವುದರಿಂದ ವ್ಯವಸಾಯದಲ್ಲಿ ಸಂತೋಷವಿದೆ. ನೆಮ್ಮದಿಯ ಬದುಕು ಸಿಕ್ಕಿದೆ. ಇದಕ್ಕಿಂತ ಹೆಚ್ಚಿನದೇನೂ ನಾನು ಬಯಸುವುದಿಲ್ಲ’ ಎಂದು ಹೇಳಿದ.

ಹಣವೊಂದಿದ್ದರೆ ಎಲ್ಲವನ್ನೂ ಖರೀದಿಸಬಹುದೆಂಬ ಶೆಟ್ಟಿಯ ನಂಬಿಕೆ ಹಾರಿಹೋಯಿತು. ದೇಹಕ್ಕೆ ಸುಖವಿಲ್ಲ ದಿದ್ದರೆ ಹಣ ಎಷ್ಟಿದ್ದರೂ ಅದನ್ನು ಪಡೆಯಲಾಗದು. ಸಂಪತ್ತು ತುಂಬಿದರೆ ಚಿಂತೆ ತಪ್ಪದು ಎಂದು ಅವನಿಗೆ ದೃಢವಾಯಿತು.

ಅಯಾಚಿತವಾಗಿ ಬಂದ ಸಂಪತ್ತಿನಲ್ಲಿ ಸ್ವಲ್ಪ ಮಾತ್ರ ಉಳಿಸಿಕೊಂಡು ಶೆಟ್ಟಿ ಉಳಿದ ಹಣದಲ್ಲಿ ನೊಂದವರಿಗೆ ನೆರವು ನೀಡಿದ. ತಾನು ಮತ್ತೆ ಚಕ್ಕುಲಿ ವ್ಯಾಪಾರದಲ್ಲಿ ಪರಿಶ್ರಮದಿಂದ ಬದುಕಿ ಕಳೆದುಕೊಂಡ ಆರೋಗ್ಯವನ್ನು ಗಳಿಸಿದ. ಆರೋಗ್ಯವನ್ನು ಮೀರಿಸಿದ ಭಾಗ್ಯ ಇನ್ನೊಂದಿಲ್ಲವೆಂದು ತಿಳಿದುಕೊಂಡ.

 

ಪ. ರಾಮಕೃಷ್ಣ ಶಾಸಿ | Aug 14, 2011

(ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದದ್ದು)

Advertisements
  1. Leave a comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: